ರಂಗಿತರಂಗ ನಿರ್ಮಾಪಕರ ನೂತನ ಚಿತ್ರ
Posted date: 27 Sat, Aug 2016 – 08:50:48 AM

‘ರಂಗಿತರಂಗ ಚಿತ್ರ ಹರಡಿದ್ದ ಹವಾ ಎಂಥಾದ್ದೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಚಿತ್ರದ ಮೂಲಕ ಬರೀ ದಾಖೆಲೆಗಳಷ್ಟೇ ನಿರ್ಮಾಣವಾಗಲಿಲ್ಲ, ಬದಲಾಗಿ ಒಂದಷ್ಟು ಹೊಸಾ ಪ್ರತಿಭೆಗಳೂ ಹೊರ ಬಂದಿವೆ. ಇವರೆಲ್ಲರ ಮುಂದಿನ ನಡೆ ಯಾವುದು ಎಂಬ ಕುತೂಹಲ ಚಾಲ್ತಿಯಲ್ಲಿರುವಾಗಲೇ ರಂಗಿತರಂಗ ನಿರ್ಮಾಪಕರಾಗಿದ್ದ ಹೆಚ್.ಕೆ ಪ್ರಕಾಶ್ ಎರಡನೇ ಚಿತ್ರಕ್ಕೆ ತಯಾರಾಗಿದ್ದಾರೆ!
ಪ್ರಕಾಶ್ ಕೂಡಾ ರಂಗಿತರಂಗ ಚಿತ್ರಕ್ಕೆ ಹಣ ಹೂಡುವ ಮೂಲಕವೇ ಚಿತ್ರ ರಂಗಕ್ಕೆ ಹೊಸದಾಗಿ ಪರಿಚಯ ಮಾಡಿಕೊಂಡಿದ್ದವರು. ಇದೀಗ ಎರಡನೇ ಚಿತ್ರಕ್ಕೆ ಸಂಪೂರ್ಣವಾಗಿ ತಯಾರಿ ಮಾಡಿಕೊಂಡಿದ್ದಾರೆ. ಅಂದಹಾಗೆ ಇನ್ನೂ ಹೆಸರಿಡದ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ್ ನಾಯಕ ನಾಯಕಿಯರಾಗಿ ನಿಕ್ಕಿಯಾಗಿದ್ದಾರೆ. ಈ ಚಿತ್ರದ ಮೂಲಕವೇ ಸಚಿನ್ ಎಂಬ ಪ್ರತಿಭೆ ನಿರ್ದೇಶಕನಾಗಿ ಅನಾವರಣಗೊಳ್ಳಲಿದ್ದಾರೆ.
ಸಚಿನ್ ಈಗಾಗಲೇ ಸಂಕಲನಕಾರರಾಗಿ ಗುರುತಿಸಿಕೊಂಡಿರುವವರು. ಸಿಂಪಲ್ಲಾಗೊಂದ್ ಲವ್ ಸ್ಟೋರಿ, ಉಳಿದವರು ಕಂಡಂತೆ, ಬಹುಪರಾಕ್, ಸಿದ್ಧಾರ್ಥ ಮುಂತಾದ ಚಿತ್ರಗಳಲ್ಲಿ ಸಂಕಲನಕಾರರಾಗಿ ಗಮನ ಸೆಳೆದಿದ್ದ ಸಚಿನ್ ಇದೀಗ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಚಿತ್ರಕ್ಕೂ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಕಥೆ, ಚಿತ್ರಕಥೆ, ನಿರ್ದೇಶನ ಮತ್ತು ಸಂಕಲನದ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.
ಇದು ಸಾಂಸಾರಿಕ, ಮನೋರಂಜನಾತ್ಮಕತೆಯ ಜೊತೆಗೆ ಪಕ್ಕಾ ಲವ್‌ಸ್ಟೋರಿ ಹೊಂದಿರೋ ಕಥೆಯಂತೆ. ಈಗಾಗಲೇ ಗೋಧಿ ಮೈ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ ಭಿನ್ನವಾದ ಸಂಗೀತ ಸಂಯೋಜನೆ ಮಾಡಿ ಗಮನ ಸೆಳೆದಿರುವ ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜಯಂತ್ ಕಾಯ್ಕಿಣಿ, ಸಿಂಪಲ್ ಸುನಿ, ಧನಂಜಯ್ ಮತ್ತು ಸುಬ್ಬು ಗೀತರಚನೆ ಮಾಡಲಿದ್ದಾರೆ. ಸಂಗೀತದ ದೃಷ್ಟಿಯಿಂದಲೂ ಗಮನ ಸೆಳೆಯುವಂತಿರಬೇಕೆಂಬ ಕಾಳಜಿಯಿಂದಲೇ ಆರು ಹಾಡುಗಳು ತಯಾರಾಗಲಿವೆ.
ಮನೋಹರ ಜೋಶಿ ಕ್ಯಾಮೆರಾ ನಿರ್ವಹಣೆ ಇರುವ ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ ಮೊದಲ ವಾರದಿಂದಲೇ ಶುರುವಾಗಲಿದೆ. ಬೆಂಗಳೂರು, ಮುನ್ನಾರ್ ಮತ್ತು ಊಟಿ ಮುಂತಾದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲು ಸಂಪೂರ್ಣ ತಯಾರಿ ಈಗಾಗಲೇ ಮುಗಿದಿದೆ.
ಈ ಚಿತ್ರದ ನಿರ್ಮಾಪಕರಾದ ಹೆಚ್.ಕೆ ಪ್ರಕಾಶ್ ರಂಗಿತರಂಗ ಚಿತ್ರದ ಮೂಲಕ ಅನೂಪ್ ಹಾಗೂ ನಿರೂಪ್ ಭಂಡಾರಿ ಎಂಬ ಪ್ರತಿಭಾವಂತರನ್ನು ಚಿತ್ರ ರಂಗಕ್ಕೆ ಪರಿಚಯಿಸಿ ತಾವೂ ಪಾದಾರ್ಪಣೆ ಮಾಡಿದವರು. ಈ ಚಿತ್ರವನ್ನೇ ದಾರಿಯನ್ನಾಗಿಸಿಕೊಂಡ ಒಂದಷ್ಟು ಪ್ರತಿಭೆಗಳು ಬೆಳಕು ಕಂಡಿವೆ. ಇವರ ಈ ಎರಡನೇ ಚಿತ್ರದ ಮೂಲಕವೂ ಮತ್ತೊಮ್ಮೆ ಹೊಸಾ ದಾಖಲೆಗಳ ತರಂಗ ಏಳಲಿದೆಯಾ ಅಂತೊಂದು ಕೌತುಕ ಸಹಜವಾಗಿಯೇ ಹುಟ್ಟಿಕೊಂಡಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed